ಮ್ಯಾಂಗಿಫೆರಾ ಇಂಡಿಕಾ ಎಲ್

ಕನ್ನಡದ ಹೆಸರು : ಮಾವಿನ ಮರ
ಸಾಮಾನ್ಯ ಹೆಸರು : ಮ್ಯಾಂಗೊ ಟ್ರೀ
ಕುಟುಂಬದ ಹೆಸರು : ಅನಕಾರ್ಡಿಯೇಸಿ
ವೈಜ್ಞಾನಿಕ ಹೆಸರು : ಮ್ಯಾಂಗಿಫೆರಾ ಇಂಡಿಕಾ
ಪ್ರಭೇದದ ಪ್ರಕಾರ: ಸ್ಥಳೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಫೆಬ್ರವರಿ - ಮಾರ್ಚ್
ಹಣ್ಣಾಗುವ ಅವಧಿ: ಮೇ - ಜೂನ್
ಮೂಲ: ಭಾರತೀಯ ಉಪಖಂಡ

ಉಪಯೋಗಗಳು

ಎಲೆಗಳು ಸ್ರಾವ ನಿರೋಧಕ ಮತ್ತು ಹಲ್ಲುಗಳನ್ನು ಕಾಪಾಡುವ ಗುಣಗಳನ್ನು ಹೊಂದಿರುತ್ತವೆ. ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಎದೆನೋವು(ಆಂಜಿನಾ), ಆಸ್ತಮಾ, ಕೆಮ್ಮು ಮತ್ತು ಮಧುಮೇಹದಂತಹ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಯಾಗಿ ಕಷಾಯವನ್ನು ಕುಡಿಯಲಾಗುತ್ತದೆ. ರೋಗದಿಂದ ಚೇತರಿಸಿಕೊಳ್ಳಲು ಮಾಡಿಸುವ ಸ್ನಾನದಲ್ಲಿ ಎಲೆಗಳನ್ನು ಬಳಸಲಾಗುತ್ತದೆ. ಎಲೆಗಳಿಂದ ತಯಾರಾದ ವದನಕ್ಷಾಲಕ (ಮೌತ್‌ವಾಶ್) ಒಸಡುಗಳನ್ನು ಗಟ್ಟಿಯಾಗಿಸಲು ಮತ್ತು ಹಲ್ಲಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವುದಕ್ಕೆ ಸಹಾಯ ಮಾಡುತ್ತದೆ. ಚರ್ಮದ ಉಪದ್ರವವನ್ನು/ಕೆರಳಿಕೆಯನ್ನು ನಿವಾರಿಸಲು ಎಲೆಗಳನ್ನು ಬಳಸಲಾಗುತ್ತದೆ. ಸುಟ್ಟು ಪುಡಿ ಮಾಡಿದ ಎಲೆಗಳ ಚೂರ್ಣವನ್ನು ನರಹುಲಿಗಳನ್ನು ತೆಗೆದುಹಾಕಲು ಪ್ಲ್ಯಾಸ್ಟರ್ ಮಾಡಲು ಬಳಸಲಾಗುತ್ತದೆ ಮತ್ತು ಇದು ರಕ್ತಸ್ರಾವ ನಿರೋಧಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಕಾಂಡ ಸ್ರಾವನಿರೋಧಕವಾಗಿದೆ(ಆಸ್ಟ್ರಿಂಜೆಂಟ್). ಇದನ್ನು ಅತಿಸಾರದ ಚಿಕಿತ್ಸೆಗೆ ಮತ್ತು ಹೊಟ್ಟೆ-ನೋವು ನಿವಾರಿಸಲು ಬಳಸಲಾಗುತ್ತದೆ. ಬೇರುಗಳು ಮೂತ್ರವರ್ಧಕವಾಗಿವೆ..

ವಿವರಣೆ

. 30 ಮೀ ನಷ್ಟು ಎತ್ತರವಿರುವ, ಮಧ್ಯಮದಿಂದ ದೊಡ್ಡ ಗಾತ್ರದ ನಿತ್ಯಹರಿದ್ವರ್ಣ ಮರ. ಕಡು ಬೂದು ಬಣ್ಣದ ತೊಗಟೆ ಒರಟಾಗಿರುತ್ತದೆ, ಅದರಲ್ಲಿ ಪ್ರಜ್ವಲಿಸುವ ಹಳದಿ ಬಣ್ಣದ ಉದ್ದನೆಯ ಬಿರುಕುಗಳಿರುತ್ತವೆ, ಅದರಿಂದ ಜಿನುಗುವ ರಸ ಹಳದಿಯಾಗಿರುತ್ತದೆ ಮತ್ತು ಅಂಟಂಟಾಗಿರುತ್ತದೆ. ಎಲೆಗಳು ಸರಳವಾಗಿರುತ್ತವೆ, ಆಲ್ಟರ್ನೇಟ್ ಆಗಿದ್ದು, ಕಿರುಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ, ಉಬ್ಬಿದಂತಿರುತ್ತವೆ (ಪಲ್ವಿನೇಟ್), ಅಂಡಾಕಾರ, ಅಂಡಾಕಾರ-ಲ್ಯಾನ್ಸಿಲೇಟ್, ಉದ್ದ (ಲೀನಿಯರ್) - ಆಯತಾಕಾರದಲ್ಲಿರುತ್ತವೆ, ಚರ್ಮದಂತಿದ್ದು , ರೋಮರಹಿತವಾಗಿರುತ್ತವೆ, ಬುಡ ಸಪೂರ ಅಥವಾ ಚೂಪಾಗಿರುತ್ತದೆದ, ಚೂಪು ಅಥವಾ ಹರಿತವಾಗಿರದ ಚೂಪು ತುದಿ ಇರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ತುದಿಯಲ್ಲಿರುವ ಒಂದು ಒತ್ತಾಗಿಲ್ಲದ ಹೂ ಗೊಂಚಲು (ಪ್ಯಾನಿಕಲ್). ಪಾಲಿಗ್ಯಾಮಸ್ ಹೂವುಗಳು, ಹಸಿರು-ಬಿಳಿಯಿಂದ ಹಳದಿ-ಹಸಿರು ಬಣ್ಣದಲ್ಲಿರುತ್ತವೆ. ಹಣ್ಣು ಒಂದು ಗೊರಟೆ ಹಣ್ಣು (ಡ್ರೂಪ್), ಆಯತಾಕಾರ-ಮೂತ್ರಪಿಂಡದಾಕಾರದಲ್ಲಿರುತ್ತದೆ, ಕುಗ್ಗಿದಂತಿರುವ ಹಣ್ಣು ಮಾಗಿದಾಗ , ಹಳದಿ-ಕೆಂಪು ಬಣ್ಣ ಪಡೆಯುತ್ತದೆ, ಮೆಸೊಕಾರ್ಪ್ ತಿರುಳಿನಿಂದ ತುಂಬಿರುತ್ತದೆ , ಕಾಡು ಮರಗಳಲ್ಲಿ ಅದು ಫೈಬ್ರಸ್ ಆಗಿರುತ್ತದೆ, ಅಂತಃಫಲಕವಚ (ಎಂಡೋಕಾರ್ಪ್) ನಾರಿನಿಂದ ಕೂಡಿರುತ್ತದೆ (ಫೈಬ್ರಸ್); ಸ್ವಲ್ಪ ಮೂತ್ರಪಿಂಡದಾಕಾರದಲ್ಲಿರುವ ಒಂದು ಬೀಜವಿರುತ್ತದೆ.