ಪೆಲ್ಟೋಫೊರಮ್ ಪ್ಟೆರೋಕಾರ್ಪಮ್ (ಡಿಸಿ.) ಬ್ಯಾಕರ್ ಎಕ್ಸ್ ಕೆ.ಹೀನಿ

ಕನ್ನಡದ ಹೆಸರು : ಬೂರುಗ
ಸಾಮಾನ್ಯ ಹೆಸರು : ಕಾಪರ್ ಪಾಡ್
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಪೆಲ್ಟೋಫೊರಮ್ ಪ್ಟೆರೋಕಾರ್ಪಮ್ (ಡಿಸಿ.) ಬ್ಯಾಕರ್ ಎಕ್ಸ್ ಕೆ.ಹೀನಿ
ಪ್ರಭೇದದ ಪ್ರಕಾರ: ವಿದೇಶೀಯ
ಪ್ರಕೃತಿ ಶಾಸ್ತ್ರ : ನಿತ್ಯಹರಿದ್ವರ್ಣ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಮಾರ್ಚ್ ನಿಂದ ಮೇವರೆಗೆ ಮತ್ತು ಸೆಪ್ಟೆಂಬರ್ ನಿಂದ ನವೆಂಬರ್ ವರೆಗೆ
ಹಣ್ಣಾಗುವ ಅವಧಿ: ವರ್ಷಪೂರ್ತಿ
ಮೂಲ: ಆಗ್ನೇಯ ಏಷ್ಯಾ

ಉಪಯೋಗಗಳು

.ಸಾಂಪ್ರದಾಯಿಕ ಔಷಧದಲ್ಲಿ ಪ್ರಸವಬೇನೆಯ ನಂತರದಲ್ಲಿ ಉಂಟಾಗುವ ಕರುಳಿನ ತೊಂದರೆಗಳನ್ನು ನಿವಾರಿಸಲು,ಮತ್ತು ನೋವು, ಉಳುಕು, ಮೂಗೇಟುಗಳು ಮತ್ತು ಊತ ಮುಂತಾದುವನ್ನು ಗುಣಪಡಿಸಲು ಅಥವಾ ನಿವಾರಿಸಲು ಸ್ರಾವನಿರೋಧಕವನ್ನಾಗಿ (ಆಸ್ಟ್ರಿಂಜೆಂಟ್) ಬಳಸಲಾಗುತ್ತದೆ ಅಥವಾ ಕಣ್ಣಿನ ತೊಂದರೆಗಳು, ಸ್ನಾಯು ನೋವುಗಳು ಮತ್ತು ಹುಣ್ಣುಗಳಿಗೆ ಲೋಷನ್ ಆಗಿ ಬಳಸಲಾಗುತ್ತದೆ. ಇದನ್ನು ಬಾಯಿ ಮುಕ್ಕಳಿಸುವ ಗಂಡೂಕ್ಷಕ್ಕೂ ಮತ್ತು ಹಲ್ಲಿನ ಪುಡಿಗಳಿಗೂ ಬಳಸಲಾಗುತ್ತದೆ. ಚಿಗುರೆಲೆ ಮತ್ತು ಮೊಗ್ಗುಗಳಲ್ಲಿ ಶಿಲೀಂದ್ರ ನಾಶಕ (ಅಂಟಿಫಂಗಲ್) ಅಂಶವಿರುತ್ತದೆ. ಹೂವುಗಳಿಂದ ಹೊರತೆಗೆದ ಮದ್ಯಸಾರದಲ್ಲಿ ಉರಿಯೂತವನ್ನು ನಿವಾರಿಸುವ ಮತ್ತು ಜೀವಿರೋಧಿ ಸತ್ವವಿದೆ.

ವಿವರಣೆ

12-24 ಮೀ ಎತ್ತರವಿರುವ, ನಿತ್ಯಹರಿದ್ವರ್ಣ ಮರಗಳು. ಬೂದು ಬಣ್ಣದ ತೊಗಟೆ , ನಯವಾಗಿದ್ದು, ಉಬ್ಬುತೂತುಗಳಿರುತ್ತವೆ. ಕವಲುಗರಿ (ಬೈಪಿನ್ನೇಟ್) ಎಲೆಗಳು, 7-15 ಜೋಡಿ ಉಪಪರ್ಣಗಳಿರುತ್ತವೆ, ಪ್ರತಿ ಉಪಪರ್ಣಕ್ಕೆ 7-21 ಜೋಡಿ ಚಿಗುರೆಲೆಗಳಿರುತ್ತವೆ; ಚಿಗುರೆಲೆಗಳು ಆಪೊಸಿಟ್ ಆಗಿದ್ದು, ಒಬ್ಲಾಂಗ್ – ಒಬೊವೇಟ್ ಆಕಾರದಲ್ಲಿರುತ್ತವೆ. ಎಲೆಗಳು ಚರ್ಮದಂತಿದ್ದು, ಮೃದುತುಪ್ಪಳದಿಂದ ರೋಮರಹಿತವಾಗಿರುತ್ತವೆ, ಓರೆಯಾದ ಬುಡವಿದ್ದು, ತುದಿ ದುಂಡು, ಚೂಪಾಗಿರುತ್ತದೆ, ಅಂಚು ಸಂಪೂರ್ಣವಾಗಿರುತ್ತದೆ. ಪುಷ್ಪಮಂಜರಿ ಒಂದು ತುದಿ ಅಥವಾ ಅಕ್ಷಾಕಂಕುಳಿನ ಹೂಗೊಂಚಲು (ಪ್ಯಾನಿಕಲ್). ಮೃದು ತುಪ್ಪಳವಿರುವ ದ್ವಿಲಿಂಗಿ ಹೂವುಗಳು ಹಳದಿ ಬಣ್ಣದಲ್ಲಿರುತ್ತವೆ. ಹಣ್ಣು, ತಾಮ್ರ-ಕೆಂಪು ಬಣ್ಣದ, ಆಯತಾಕಾರದ, ತೆಳು, ಗಟ್ಟಿ, ಚಪ್ಪಟೆಯಾದ, ಎರಡೂ ತುದಿಗಳಲ್ಲಿ ಕಿರಿದಾಗಿರುವ, 5-10 ಸೆಂ.ಮೀ. ಉದ್ದವಿರುವ ಒಂದು ಬೀಜಕೋಶ. 2-4 ಕಂದು ಬಣ್ನದ ಬೀಜಗಳಿರುತ್ತವೆ.