ಟ್ಯಾಮರಿಂಡಸ್ ಇಂಡಿಕಾ ಎಲ್.

ಕನ್ನಡದ ಹೆಸರು : Hunase mara ಹುಣಸೆ ಮರ
ಸಾಮಾನ್ಯ ಹೆಸರು : ಟ್ಯಾಮರಿಂಡ್
ಕುಟುಂಬದ ಹೆಸರು : ಫ್ಯಾಬೇಸಿ
ವೈಜ್ಞಾನಿಕ ಹೆಸರು : ಟ್ಯಾಮರಿಂಡಸ್ ಇಂಡಿಕಾ ಎಲ್.
ಪ್ರಭೇದದ ಪ್ರಕಾರ: ವಿದೇಶಿ
ಪ್ರಕೃತಿ ಶಾಸ್ತ್ರ : ಪತನಶೀಲ
ಸಂರಕ್ಷಣೆಯ ಸ್ಥಿತಿ : ತಿಳಿದಿಲ್ಲ
ಹೂಬಿಡುವ ಅವಧಿ: ಏಪ್ರಿಲ್ - ಜೂನ್
ಹಣ್ಣಾಗುವ ಅವಧಿ: ಅಕ್ಟೋಬರ್ - ಡಿಸೆಂಬರ್
ಮೂಲ: ಉಷ್ಣವಲಯದ ಆಫ್ರಿಕಾ

ಉಪಯೋಗಗಳು

ಎಲೆಗಳ ಸಾರಗಳು ಯಕೃತ್ತಿನಲ್ಲಿ ಉತ್ಕರ್ಷಣ ನಿರೋಧ (ಆಂಟಿ-ಆಕ್ಸಿಡೆಂಟ್) ಗುಣಗಳನ್ನು ಹೊಂದಿವೆ. ಸಾಮಾನ್ಯವಾಗಿ ಹೃದಯ ಮತ್ತು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಔಷಧಿಗಳಲ್ಲಿ ಬಳಸಲಾಗುತ್ತದೆ. ಎಲೆಗಳ ಸಿಹಿಯಾದ ಕಷಾಯವು ಗಂಟಲಿನ ಸೋಂಕುಗಳು, ಕೆಮ್ಮು, ಜ್ವರ ಮತ್ತು ಕರುಳಿನ ಹುಳುಗಳ ವಿರುದ್ಧ ಪರಿಣಾಮಕಾರಿಯಾಗಿದೆ. ಇದರ ಹಣ್ಣು ಅಪೆರಿಯಂಟ್ (ಮಲಬದ್ಧತೆಯನ್ನು ನಿವಾರಿಸಲು ಬಳಸುವ ಔಷಧ) ಮತ್ತು ವಿರೇಚಕ ಎರಡೂ ಆಗಿದೆ. ಮಾಗಿದ ಹಣ್ಣಿನಿಂದ ಮಾಡಿದ ಸಿರಪ್ (ಸಿಹಿಯಾದ ದ್ರವ) ಅನ್ನು ಜೀರ್ಣಕಾರಿ ಅಂಗಗಳನ್ನು ಆರೋಗ್ಯಕರವಾಗಿಡಲು ಮತ್ತು ಕೆಮ್ಮು ಮತ್ತು ಎದೆ ಶೀತಗಳಿಗೆ ಪರಿಹಾರವಾಗಿ ಕುಡಿಯಲಾಗುತ್ತದೆ. ಜ್ವರಕ್ಕೆ ಚಿಕಿತ್ಸೆ ನೀಡಲು ಮತ್ತು ಹೊಟ್ಟೆಯ ಆಮ್ಲವನ್ನು (ಗ್ಯಾಸ್ಟ್ರಿಕ್ ) ಕಡಿಮೆ ಮಾಡಲು ಹಣ್ಣಿನ ಮಧ್ಯದ ತಿರುಳನ್ನು ಸೇವಿಸಲಾಗುತ್ತದೆ.

ವಿವರಣೆ

ಇವು 20 ಮೀ ಎತ್ತರದವರೆಗೆ ಬೆಳೆಯುವ ನಿತ್ಯಹರಿದ್ವರ್ಣ ಮರಗಳಾಗಿವೆ, ಇವುಗಳ ತೊಗಟೆ ಕಂದು ಅಥವಾ ಕಂದು ಮಿಶ್ರಿತ ಕಪ್ಪು ಬಣ್ಣದಿಂದ ಕೂಡಿದ್ದು, ಲಂಬವಾದ ಬಿರುಕುಗಳೊಂದಿಗೆ ಒರಟಾಗಿರುತ್ತದೆ; ಕೊಂಬೆಗಳು ಗಂಟುಗಳಿಂದ ಕೂಡಿರುತ್ತವೆ ಮತ್ತು ಮೃದುವಾದ ಉಣ್ಣೆಯ ಕೂದಲಿನಿಂದ ಮುಚ್ಚಲ್ಪಟ್ಟಿರುತ್ತವೆ. ಕೇಂದ್ರ ಕಾಂಡದ ಎರಡೂ ಬದಿಯಲ್ಲಿ ಸಮಾನ ಸಂಖ್ಯೆಯ ಚಿಗುರೆಲೆಗಳನ್ನು ಹೊಂದಿದ್ದು, ಪರ್ಯಾಯವಾಗಿರುತ್ತವೆ: ಚಿಗುರೆಲೆಗಳು ಆಯತಾಕಾರ,ರೋಮರಹಿತ, ಕಾಗದದಂತಹ ವಿನ್ಯಾಸ, ಬುಡ ಅಸಮಾನ (ಓರೆಯಾಗಿ ಒಂದು ಬದಿಯು ಇನ್ನೊಂದಕ್ಕಿಂತ ದೊಡ್ಡ,ಅಗಲ ಅಥವಾ ದುಂಡಾಗಿರುತ್ತದೆ) , ತುದಿ ಮೊಂಡಾಗಿದ್ದು, ಸಂಪೂರ್ಣ ಅಂಚನ್ನು ಹೊಂದಿರುತ್ತವೆ. ಪುಷ್ಪಮಂಜರಿ (ರೇಸಿಮ್) ಕಾಂಡದ ತುದಿಯಲ್ಲಿ ಸಮಾನ ಮಧ್ಯಂತರಗಳಲ್ಲಿ ಸಣ್ಣ ಸಮಾನ ಕಾಂಡಗಳಲ್ಲಿ ಜೋಡಿಸಲಾದ ಪ್ರತ್ಯೇಕ ಹೂವುಗಳನ್ನು ಒಳಗೊಂಡಿರುತ್ತದೆ. ಹೂವುಗಳು ದ್ವಿಲಿಂಗಿ ಆಗಿದ್ದು, ನಸುಗೆಂಪು-ಗುಲಾಬಿ ಚುಕ್ಕೆಗಳೊಂದಿಗೆ ಹಳದಿ ಬಣ್ಣದಲ್ಲಿರುತ್ತವೆ. ಬೀನ್ಸ್ ನಂತಹ ಉದ್ದವಾದ, ಕಿರಿದಾದ, ಆಯತಾಕಾರದ (ಪೋಡ್) ಹಣ್ಣನ್ನು ಹೊಂದಿದ್ದು, ಇದರ ಹೊರ ಮೇಲ್ಮೈ ಗಟ್ಟಿಯಾದ ಶೆಲ್ ನಿಂದ ಕೂಡಿರುತ್ತದೆ. ಇವು ತಿರುಳುಳ್ಳ ಮೆಸೊಕಾರ್ಪ್ ( ಎಂಡೋಕಾರ್ಪ್ ಮತ್ತು ಎಕ್ಸೋಕಾರ್ಪ್ ನಡುವೆ ಹಣ್ಣಿನ ಪೆರಿಕಾರ್ಪ್‌ನ ಮಧ್ಯದ ಪದರ), ವಿಭಜಿತಗೊಂಡಿರುವ ಎಂಡೋಕಾರ್ಪ್ (ಬೀಜವನ್ನು ಹೊಂದಿರುವ ಹಣ್ಣುಗಳ ಪೆರಿಕಾರ್ಪ್‌ನ ಗಟ್ಟಿಯಾದ ಒಳ ಪದರ) ಅನ್ನು ಹೊಂದಿರುತ್ತದೆ ಮತ್ತು ಗಡುಸಾಗಿರುತ್ತದೆ, ಇವು ಹಣ್ಣಾದಾಗ ಬೀಜಗಳನ್ನು ಬಿಡಲು ಬಾಯಿತೆರೆದುಕೊಳ್ಳುವುದಿಲ್ಲ. ಇವು ಕಂದುಬಣ್ಣದ ಅಂಡಾಕಾರದಿಂದ ವೃತ್ತಾಕಾರದ ಸಂಕುಚಿತ ಬೀಜವನ್ನು ಹೊಂದಿರುತ್ತದೆ.